ಇಲಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯ, ದಿ

 	ಬೊಂಬಾಯಿಯ ಟೈಮ್ಸ್‍ಆಫ್ ಇಂಡಿಯ ವೃತ್ತಪತ್ರಿಕೆಗಳ ಗುಂಪಿಗೆ ಸೇರಿದ ಇಂಗ್ಲಿಷ್ ವಾರಪತ್ರಿಕೆ. ಬ್ರಿಟಿಷರು ಸ್ಥಾಪಿಸಿದ ಈ ಸಂಸ್ಥೆಯನ್ನು 1946ರಲ್ಲಿ ಭಾರತದ ಹೆಸರಾಂತ ಕೈಗಾರಿಕೋದ್ಯಮಿ ಸೇಠ್ ರಾಮಕೃಷ್ಣ ದಾಲ್ಮಿಯ ಕೊಂಡರು. ಭಾರತೀಯರೇ ಈ ಪತ್ರಿಕೆಯ ಮಾಲಿಕತ್ವದ ಸಂಪೂರ್ಣ ಹೊಣೆಯನ್ನು ಹೊತ್ತಿಕೊಂಡಿದ್ದರೂ ಬೆನೆಟ್ ಕೋಲ್ಮನ್ ಅಂಡ್ ಕಂಪನಿ ಲಿಮಿಟೆಡ್ ಎಂಬ ಹಿಂದಿನ ಹೆಸರನ್ನೇ ಇಂದಿಗೂ ಉಳಿಸಿಕೊಂಡು ಬರಲಾಗಿದೆ.

	ಇದು ಒಂದು ಅತ್ಯುತ್ತಮ ವಾರಪತ್ರಿಕೆಯೆಂದು ಹೆಸರಾಗಿತ್ತು. ಮೊದಮೊದಲು ಈ ಪತ್ರಿಕೆ ಟೈಮ್ಸ್ ಆಫ್ ಇಂಡಿಯ ದಿನಪತ್ರಿಕೆಯ ಅಂಗವಾಗಿ ಟೈಮ್ಸ್ ಆಫ್ ಇಂಡಿಯ ವೀಕ್ಲಿ ಎಂಬ ಹೆಸರಿನಲ್ಲಿ ಪ್ರಕಟವಾಗುತ್ತಿತ್ತು. 1880ರಲ್ಲಿ ಇದನ್ನು ಪ್ರತ್ಯೇಕವಾಗಿ ಪ್ರಕಟಿಸಲು ಆರಂಭಿಸಿದರು. ಮುಂದೆ ಭಾರತೀಯ ಪತ್ರಿಕೋದ್ಯಮದಲ್ಲಿ ಚಿತ್ರಗಳು ಹೆಚ್ಚು ಜನಪ್ರಿಯತೆಯನ್ನು ಗಳಿಸಿಕೊಂಡದ್ದರಿಂದ 1901ರಲ್ಲಿ ಈ ಪತ್ರಿಕೆಯ ಹೆಸರನ್ನು ದಿ ಇಲಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯ ಎಂದು ಬದಲಾಯಿಸಿ, ಚಿತ್ರಗಳ ಮೂಲಕ ಸುದ್ದಿ, ಲೇಖನಗಳನ್ನು ನೀಡಲಾರಂಭಿಸಿದರು. ಅಂದಿನಿಂದ ಇದು ಹೆಚ್ಚು ಜನಪ್ರಿಯತೆಯನ್ನು ಗಳಿಸಿಕೊಂಡಿತಲ್ಲದೆ, ಇಡೀ ಏಷ್ಯದಲ್ಲಿ ಪ್ರಕಟವಾಗುವ ಉತ್ತಮ ವಾರಪತ್ರಿಕೆಗಳಲ್ಲಿ ಮಹತ್ವದ ಸ್ಥಾನ ಗಳಿಸಿಕೊಂಡಿತ್ತು.

	ಈ ಪತ್ರಿಕೆಯಲ್ಲಿ ರಾಜಕೀಯಕ್ಕೆ ಸಂಬಂಧಿಸಿದ ಲೇಖನಗಳು, ಸಣ್ಣ ಕಥೆ, ವ್ಯಂಗ್ಯ ಚಿತ್ರಗಳು, ನಗೆಬರಹಗಳು, ಶೈಕ್ಷಣಿಕ ಮತ್ತು ಧಾರ್ಮಿಕ ವಿಷಯಗಳಿಗೆ ಸಂಬಂಧಿಸಿದ ಲೇಖನಗಳು ಇನ್ನೂ ಅನೇಕ ಬಗೆಯ ಸುದ್ದಿಸಾರಗಳು ಪ್ರಕಟವಾಗುತ್ತಿದ್ದು ಓದುಗರ ಮನಸ್ಸನ್ನು ಬಲು ಆಕರ್ಷಿಸಿತ್ತು. ಸಾಮಾನ್ಯವಾಗಿ ವಾರವಾರವೂ ಭಾರತಕ್ಕೆ ಸಂಬಂಧಿಸಿದ ಸಚಿತ್ರ ಲೇಖನಗಳು ಈ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದವು. ಅಲ್ಲದೆ ವರ್ಷದಲ್ಲಿ ಅನೇಕ ವಿಶೇಷಾಂಕಗಳು ಪ್ರಕಟವಾಗುತ್ತಿತ್ತು. ವಾರ್ಷಿಕ ವಿಷೇಷ ಸಂಚಿಕೆಯಂತೂ ಸರ್ವಾಂಗ ಸುಂದರವಾಗಿದ್ದು ಭಾರತೀಯ ಕಲೆ, ಸಾಹಿತ್ಯ, ಗತ ವೈಭವ, ಪ್ರಚಲಿತ ರಾಜಕೀಯ ದೃಷ್ಟಿಗಳಿಂದ ಸಂಗ್ರಹಯೋಗ್ಯವಾಗಿತ್ತು. ಸಿ. ಆರ್. ಮಾಂಡೆ, ಎ. ಎಸ್. ರಾಮನ್ ಇವರ ನಂತರ ಸಂಪಾಕಕರಾದ ಖುಷ್ವತಂತ್ ಸಿಂಗ್ ಅವರನಂತರ ಎಂ ವಿ ಕಾಮತ್, ಪ್ರವೇಶ್ ನಂದಿ ಸಂಪಾದಕರಾದ ಮೇಲೆ ಪ್ರಸಾರ ಇಳಿಮುಖವಾಗಿ ಪ್ರಕಟಣೆ ನಿಂತಿತು.

(ಎಚ್.ಎಸ್.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ